ಪದರಿಕೆ -
ಭೂವ್ಯಾಪಾರಗಳ ಪರಿಣಾಮವಾಗಿ ಶಿಲಾ ಸಂಚಯಗಳಲ್ಲಿ ಪದರುಗಳು ರೂಪಗೊಳ್ಳುವಿಕೆ (ಲ್ಯಾಮಿನೇಶನ್).  ಸಂಚಿತ ಶಿಲಾನಿರ್ಮಾಣ ಕಾಲದಲ್ಲಿ ಭೂಮಿಯ ಮೇಲಿನ ಶಿಲೆಗಳು ಶಿಥಿಲಗೊಂದು ಸಣ್ಣ ಸಣ್ಣ ಕಣಗಳಾಗಿ ಮಾರ್ಪಡುತ್ತವೆ.  ಬೀಸುವ ಗಾಳಿ ಹರಿಯುವ ನದಿ ನೀರು ಮುಂತಾದ ನಿಯೋಗಿಗಳ ಸಹಾಯದಿಂದ ಇವು ಸಾಗರ ಅಥವಾ ಸರೋವರ ತಳವನ್ನು ಸೇರುತ್ತವೆ.  ತಳ ಸೇರಿದ ಶಿಲಾಕಣಗಳು ಒಂದರೆ ಮೇಲೆ ಮತ್ತೊಂದು ಬಿದ್ದು ಸಂಚಿತವಾಗುತ್ತವೆ.  ಹೀಗೆ ಹಂತಹಂತದಲ್ಲಿ ಸಂಚಯನಗೊಳ್ಳುವ ಶಿಲೆಗಳಲ್ಲಿ ಪ್ರತಿ ಹಂತದಲ್ಲಿ ಸಂಚಯನ ಬೇರೆ ಬೇರೆ ಹಾಸಿನಂತೆ ಪ್ರತ್ಯೇಕವಾಗಿ ಕಾಣುತ್ತದೆ.  ಈ ಹಾಸು ಸ್ವರೂಪ ಸಂಚಿತ ಶಿಲೆಗಳ ಪ್ರಮುಖ ಗುಣ.  ಅವಸಾದನ ಇಲ್ಲವೇ ಜಲಜ ಶಿಲೆಗಳೆಂದರೂ ಇವೆ.

	ಹಾಸುಗಳ ಗಾತ್ರ 1 ಸೆಂಟಿಮೀಟರಿಗಿಂತ ಕಡಿಮೆಯಾದರೆ ಅದಕ್ಕೆ ಪದರು ಎಂದು ಹೆಸರು.  ತೆಳುಪದರಗಳ ನಿರ್ಮಾಣ ಪ್ರಕ್ರಿಯೆಯೇ ಪದರಿಕೆ.  ಸಂಚಯನ ಪಾತ್ರನ್ನು ಕೆಸರು ಅಥವಾ ಜೇಡಿ ಸೇರಿದಾಗ ಸೂಕ್ಷ್ಮ ಶಿಲಾಕಣಗಳ ಮಧ್ಯೆ ನೀರು ತುಂಬಿಕೊಂಡು ಸಂಚಯಿಸಲು ಶಕ್ತಿಹೀನವಾಗಿರುತ್ತದೆ.  ಕ್ರಮೇಣ ಅಗಾಧ ಮೊತ್ತದಲ್ಲಿ ಇದೇ  ರೀತಿಯ ಕಣಗಳು ಮೇಲೆ ಮೇಲೆ ಬಂದು ಕೂರುತ್ತ ಬೆಳೆಯುತ್ತಿರುವ ಮೇಲುತೂಕ ಶಿಲಾಕಣಗಳ ನಡುವಣ ನೀರನ್ನು ಹಿಂಡಿ ತೆಗೆದು ಕಣಗಳು ಒಂದನ್ನೊಂದು ಅಂಟುಕೊಂಡು ಗಟ್ಟಿಯಾಗುವಂತೆ ಮಾಡಿ ಪದರುಗಳ ನಿರ್ಮಾಣವಾಗುತ್ತದೆ.  

	ಪದರುಗಳನ್ನು ಕಣ್ಣು ನೋಟದಲ್ಲಿ ಪ್ರತ್ಯೇಕಿಸಬಹುದು.  ಪ್ರತ್ಯೇಕತೆಗೆ ಕಾರಣ ಶಿಲಾಕಣಗಳ ಖನಿಜ ಗುಣದಲ್ಲಿ ವ್ಯತ್ಯಾಸ ಆಗಿರಬಹುದು; ಅಥವಾ ಒಂದು ಪದರದ ಶಿಲಾಕಣಗಳು ಸಂಚಯನಗೊಂಡು ಸ್ವಲ್ಪ ಕಾಲಾನಂತರ ಮತ್ತೊಂದು ಪದರದ ಶಿಲಾಕಣಗಳು ಸಂಚಯನಗೊಳ್ಳಲು ಆರಂಭಿಸಿದ್ದಾಗಿರಬಹುದು.  ಪದರುಗಳ ಮಧ್ಯೆ ಇರುವ ಶಕ್ತಿಹೀನವಲಯ ಶಿಲೆಯನ್ನು ಸುಲಭವಾಗಿ ಪದರು ಪದರವಾಗಿ ಬೇರ್ಪಡಿಸಲು ಅನುವಾಗುತ್ತದೆ. ಇದಕ್ಕೆ ಪದರುಮುರಿಕೆ (ಫಿಸ್ಸೈಲಿಟಿ) ಎಂದು ಹೆಸರು. ಕೆಲವೊಮ್ಮೆ ಈ ಪದರಿಕೆ ಮೇಲಿನ ಮತ್ತು ಕೆಳಭಾಗದ ಶಿಲಾಹಾಸುಗಳಿಗೆ ಸಮಾಂತರವಾಗಿರುವುದಿಲ್ಲ. ಅಂಥ ಪದರಿಕೆಗೆ ಅಡ್ಡ ಪದರಿಕೆ ಎಂದು ಹೆಸರು.  ಶೇಲ್ ಎಂಬ ಶಿಲೆ ಪದರಿಕೆಗೆ ಉತ್ತಮ ಉದಾಹರಣೆ. ಇದರಲ್ಲಿ ನುಣುಪಾದ ಬಿಳಿ ಮತ್ತು ಕೆಂಪು ಜೇಡಿ ಕಣಗಳು ಕಾಗದದಷ್ಟು ತೆಳುವಾದ ಪದರುಗಳಾಗಿ ಸಂಚಯಿಸಿರುವುದನ್ನು ಕಾಣಬಹುದು.
(ವೈ.ಎಲ್).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ